+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

About Us

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಭಿವೃದ್ದಿಗಾಗಿ, ಇತರೆ ಮಹಾಮಂಡಳಗಳಂತೆ ಒಂದು ಪ್ರತ್ಯೇಕ ಮಹಾಮಂಡಳವನ್ನು ಸ್ಥಾಪಿಸಲು 1996ರಲ್ಲಿ ಸಹಕಾರಿ ಧುರೀಣರು ಚಿಂತನೆ ಮಾಡಿದರು. ಅಂತಿಮವಾಗಿ ಶ್ರೀ ಬಿ.ಎಲ್.ಲಕ್ಕೇಗೌಡ ಮುಖ್ಯಪ್ರವರ್ತಕರು ಹಾಗೂ 12 ಪ್ರವರ್ತಕರು ಸೇರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿ, ಪತ್ತಿನ ಸಂಘಗಳ ನಿಬಂಧಕರು ದಿನಾಂಕ:06.11.2004ರಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವನ್ನು ನೋಂದಣಿ ಮಾಡಿದರು. ಅಂದಿನಿಂದ ಈ ಮಹಾಮಂಡಳವು ಜಯನಗರ, 3ನೇ ವಿಭಾಗ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸಂಸ್ಥೆಯ ವ್ಯವಹಾರವು ಅಭಿವೃದ್ದಿ ಹೊಂದಿದ್ದು, ನೌಕರರು ಹಾಗೂ ಆಡಳಿತಮಂಡಳಿತ ಕಾರ್ಯಕಲಾಪಗಳಿಗೆ ಸ್ಥಳದ ಕೊರತೆಯಿದ್ದ ಕಾರಣ ಕಾರ್ಯಾಲಯವನ್ನು ಬದಲಿಸುವ ಅವಶ್ಯ ಉಂಟಾದ ಕಾರಣ, ಆಡಳಿತಮಂಡಳಿ ತೀರ್ಮಾನಿಸಿದಂತೆ,ಕಾರ್ಯಾಲಯವನ್ನು ಮಲ್ಲೇಶ್ವರಂಗೆ ಸ್ಥಳಾಂತರಿಸಲಾಯಿತು. ಈ ಸಂಸ್ಥೆ 17 ವರ್ಷಗಳನ್ನು ಪೂರೈಸಿ 18ನೇ ವರ್ಷಕ್ಕೆ ಕಾಲಿರಿಸಿ ಮುನ್ನಡೆಯುತ್ತಿದೆ.
ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗಾಗಿ, ಆ ಸಂಘಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ರೂಪಿಸುವ ಜೊತೆಗೆ ಅಗತ್ಯ ಸಹಕಾರ ಶಿಕ್ಷಣ-ತರಬೇತಿ ನೀಡಲು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ಕಾರ್ಯಾರಂಭ ಮಾಡಿ ತು.
ಪತ್ತಿನ ಮಹಾಮಂಡಳವು ರಾಜ್ಯದಲ್ಲಿರುವ ಪತ್ತಿನ ಹಾಗೂ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತಿರುವ ಐದು ಸಾವಿರ ಸಹಕಾರ ಸಂಘಗಳಲ್ಲಿ ಈಗಾಗಲೇ 1950ಕ್ಕೂ ಹೆಚ್ಚು ಸಹಕಾರ ಸಂಘಗಳು ಪತ್ತಿನ ಮಹಾಮಂಡಳದಲ್ಲಿ ಸದಸ್ಯತ್ವ ಪಡೆದು, ಮಹಾಮಂಡಳದ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಹಾಗೂ ಇದರ ಪ್ರಯೋಜನ ಪಡೆಯುತ್ತಿವೆ. ಇದಕ್ಕೆ ಮಹಾಮಂಡಳದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ಉಳಿದ ಸಹಕಾರ ಸಂಘಗಳು ಪತ್ತಿನ ಮಹಾಮಂಡಳದಲ್ಲಿ ಸದಸ್ಯತ್ವ ಪಡೆಯುವ ಬಗ್ಗೆ ಮನವೊಲಿಕೆ, ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ 112 ವರ್ಷಗಳ ಇತಿಹಾಸವಿರುವ ಭಾರತೀಯ ಸಹಕಾರ ಚಳವಳಿಯಲ್ಲಿ ಪತ್ತಿನ ವಲಯ ಹೆಚ್ಚು ಕ್ರಿಯಾಶೀಲವಾಗಲು ಸಾಧ್ಯವಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಚಳವಳಿಯು ಮುಕ್ತ, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಲು 97ನೇ ಸಂವಿಧಾನ ತಿದ್ದುಪಡಿಯಲ್ಲಿ ಅವಕಾಶಗಳನ್ನು ಕಲ್ಪಿಸಿದ್ದರೂ, ಸರ್ಕಾರಗಳ ಸಹಕಾರ ಮತ್ತಷ್ಟು ನೆರವಾಗುವಂತಹ ಪೂರಕ ವಾತಾವರಣವನ್ನು ನಿರ್ಮಿಸಿಕೊಡಬೇಕಿದೆ. ಇದರಿಂದ ಸಾರ್ವಜನಿಕರು ಸಹಕಾರ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಚಳವಳಿಯನ್ನು ಸದೃಢಗೊಳಿಸುವ ಜೊತೆಗೆ ತಾವೂ ಕೂಡ ಆರ್ಥಿಕ ಸ್ವಾವಲಂಬಿಗಳಾಗಲು ಅವಕಾಶಗಳಿವೆ. ಈಗಾಗಲೇ ರಾಜ್ಯದ ಸಹಕಾರ ಚಳವಳಿಯಲ್ಲಿ 2.34 ಕೋಟಿ ಸದಸ್ಯರಿದ್ದು, ಇದು ಈಗಿನ ಜನಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೆನಿಸುತ್ತಿದೆ. ಪ್ರಸ್ತುತ ವರ್ಷಗಳಲ್ಲಿ ರಾಜ್ಯದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು, ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹೆಚ್ಚು ಕ್ರಿಯಾಶೀಲ ಹಾಗೂ ಲಾಭದಾಯಕವಾಗಿ ಸೇವೆ ಸಲ್ಲಿಸುತ್ತಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ. ಗೃಹ ನಿರ್ಮಾಣ, ವಾಹನ ಖರೀದಿ, ಜಂಟಿ ಸಾಲ, ಚಿನ್ನಾಭರಣ ಸಾಲ, ಉದ್ದಿಮೆಗಳ ಸ್ಥಾಪನೆಗೆ ಪತ್ತಿನ ವ್ಯವಸ್ಥೆ ಪೂರಕ ವಾತಾವರಣ ನಿರ್ಮಿಸಿಕೊಟ್ಟಿದೆ. ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪತ್ತಿನ ಸಹಕಾರ ಸಂಘಗಳು ಸದಸ್ಯರುಗಳಿಗೆ ತ್ವರಿತ ಸಾಲ ಮಂಜೂರು ಹಾಗೂ ಸಾಲ ವಸೂಲಾತಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದು ಸಹಕಾರ ಚಳವಳಿಗೆ ಹೆಮ್ಮೆ ಮೂಡಿಸಿದೆ.
ಮಹಾಮಂಡಳದ ಉದ್ದೇಶಗಳು ಕೆಳಗಿನಂತಿರತಕ್ಕದ್ದು.
ಪತ್ತಿನ ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಹಾಗೂ ಆ ಸಂಘಗಳ ಪದಾಧಿಕಾರಿಗಳ, ನಿರ್ದೇಶಕರ ಮತ್ತು ನೌಕರ ವರ್ಗದವರಿಗೆ, ಸಹಕಾರ ಕಾಯ್ದೆ, ನಿಯಮಗಳು ಕುರಿತಂತೆ ತರಬೇತಿ ಕಾರ್ಯಕ್ರಮಗಳನ್ನು ನೀಡುವುದಲ್ಲದೇ, ತನ್ನ ಸದಸ್ಯರಿಗೆ ಅಗತ್ಯವಿರುವ ಬ್ಯಾಂಕಿಂಗ್ ವ್ಯವಹಾರ ಠೇವಣಿ ಮತ್ತು ಉಳಿತಾಯ ಖಾತೆಗಳನ್ನು ನಿರ್ವಹಿಸುವ ಸಂಘಗಳಿಗೆ ಈ ಮಹಾಮಂಡಳವು ಸೂಕ್ತ ಮಾಹಿತಿ ಒದಗಿಸುತ್ತಿದೆ. ಒಟ್ಟಿನಲ್ಲಿ, ಪತ್ತಿನ ಸಹಕಾರ ಸಂಘಗಳ ಅಭಿವೃದ್ದಿ ಮಹಾಮಂಡಳದ ಪ್ರಮುಖ ಉದ್ದೇವಾಗಿರುತ್ತದೆ.
(1) ಜಾತಿ, ಪಂಥ ಮತ್ತು ಮತಗಳನ್ನು ಪರಿಗಣಿಸದೆ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳಿಗೆ ಸಹಕಾರ ಚಳುವಳಿಯ ಪ್ರಯೋಜನಗಳು ಲಭ್ಯವಾಗುವಂತೆ ಸದಸ್ಯ ಸಹಕಾರ ಸಂಘಗಳ ಹಿತ ಕಾಪಾಡಲು ಮತ್ತು ಸಹಕಾರ ಚಳುವಳಿಯ ಪ್ರಗತಿಗಾಗಿ ಸದಸ್ಯ ಸಂಘಗಳ ಅಧಿಕೃತ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವುದು.
(2) ರಾಜ್ಯದ ಎಲ್ಲಾ ಪತ್ತಿನ ಸಹಕಾರ ಸಂಘಗಳು ಸಹಕಾರ ತತ್ವ ಮತ್ತು ಆಚರಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರಚಾರ ನಡೆಸುವುದು ಮತ್ತು ಅವುಗಳ ಬೆಳವಣಿಗೆ ಮತ್ತು ಅವುಗಳ ಸುರಕ್ಷತೆಗೆ ಸಲಹೆ ಕೊಡುವುದು.
(3) ಪತ್ತಿನ ಸಹಕಾರ ಸಂಘಗಳ, ನೌಕರರ ಪತ್ತಿನ ಸಹಕಾರ ಸಂಘಗಳ ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳ ನೌಕರರಿಗೆ, ಪದಾಧಿಕಾರಿಗಳಿಗೆ ಆಡಳಿತಮಂಡಲಿ ಸದಸ್ಯರುಗಳಿಗೆ ಮತ್ತು ಸದಸ್ಯರುಗಳಿಗೆ ಶಿಕ್ಷಣ ತರಬೇತಿ ನೀಡುವುದು.
(4) ಸಹಕಾರ ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಸದಸ್ಯ ಸಂಘಗಳ ಸಮನ್ವಯ ಏಜೆನ್ಸಿಯಾಗಿ ವರ್ತಿಸುವುದು ಮತ್ತು ಸದಸ್ಯ ಸಂಘಗಳ ಪದಾಧಿಕಾರಿಗಳ, ನಿರ್ದೇಶಕರುಗಳ ಹಾಗೂ ಸಿಬ್ಬಂದಿಗಳ ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಪರಿಣಿತಿ ಹೊಂದಿದ ಹಿರಿಯರಿಂದ ಶಿಕ್ಷಣ ಕೊಡಿಸುವುದು.
(5) ಸಹಕಾರ ಚಳುವಳಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಮೇಲೆ ಅಧಿಕಾರೇತರ ಅಭಿಪ್ರಾಯವನ್ನು ರೂಪಿಸುವುದು, ಅದನ್ನು ಯುಕ್ತ ವೇದಿಕೆಗಳಲ್ಲಿ ನಿರೂಪಿಸುವುದು ಮತ್ತು ಸಹಕಾರ ವಿಷಯಗಳ ಬಗ್ಗೆ ಅಭಿಪ್ರಾಯ ಸೂಚಿಸುವುದು. ಅಂತಹ ವಿಷಯಗಳ ಬಗ್ಗೆ ಪ್ರಚಾರ ನಡೆಸುವುದು.
(6) ಸಹಕಾರ ಅಭಿವೃದ್ದಿಯ ಯೋಜನೆಗಳನುಸಾರ ಎಲ್ಲಾ ವಿಧದ ಸಹಕಾರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಹಾಗೂ ತಾಂತ್ರಿಕ ಮತ್ತು ಇತರ ಮಾರ್ಗದರ್ಶನ, ಸಹಾಯ ಒದಗಿಸುವ ಮೂಲಕ ರಾಜ್ಯದಲ್ಲಿನ ಪತ್ತಿನ ಸಹಕಾರ ಸಂಘಗಳನ್ನು ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳನ್ನು ಬಲವರ್ಧಿಸುವುದು.
(7) ರಾಜ್ಯದಲ್ಲಿನ ಪತ್ತಿನ ಸಹಕಾರ ಸಂಘಗಳ ಪರಸ್ಪರ ಪ್ರಯೋಜನಕ್ಕಾಗಿ ಅವುಗಳ ಬಗ್ಗೆ ಸಮನ್ವಯವನ್ನು ಉಂಟು ಮಾಡುವುದು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಾಮಾನ್ಯ ವೇದಿಕೆಯನ್ನು ಒದಗಿಸುವುದು. ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ವಿಚಾರ ವಿನಿಮಯ, ಸಭೆಗಳ ವ್ಯವಸ್ಥೆ ಮಾಡುವುದು ಮತ್ತು ಸಾಲ ವಸೂಲಾತಿಗೆ ಸಂಬಂಧಪಟ್ಟಂತೆ ಅದಾಲತ್ ಸ್ಥಾಪಿಸಿ ಆ ಮೂಲಕ ಕಾನೂನು ಕ್ರಮಕ್ಕೆ ಸಹಕರಿಸುವುದು.
(8) ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ಹಾಗೂ ಭಾರತ ರಾಷ್ಟ್ರೀಯ ಸಹಕಾರ ಒಕ್ಕೂಟಗಳೊಡನೆ ಸಂಪರ್ಕ ಇಟ್ಟುಕೊಳ್ಳುವುದು ಮತ್ತು ಸಹಕಾರ ಚಳುವಳಿಯ ಅಭಿವೃದ್ದಿಗಾಗಿ ಇತರೆ ಮಹಾಮಂಡಳಗಳ ನೀತಿ ನಿಯಮಗಳನ್ನು ಅಳವಡಿಸಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಅನುಷ್ಠಾನಗೊಳಿಸುವುದು.
(9) ಗ್ರಂಥಾಲಯಗಳನ್ನು ಮತ್ತು ವಾಚನಾಲಯಗಳನ್ನು ತೆರೆಯುವುದು ಹಾಗೂ ಸಾಮಾನ್ಯವಾಗಿ ಸಾಹಿತ್ಯದ ಬಗ್ಗೆ ವಿಶೇಷತಃ ಸಹಕಾರ, ಗ್ರಾಮೀಣಾಭಿವೃದ್ದಿ ಮತ್ತು ತತ್ಸಂಬಂಧಿತ ವಿಷಯಗಳ ಬಗ್ಗೆ ನಿಯತಕಾಲಿಕ ಪತ್ರಿಕೆಗಳನ್ನು, ಪುಸ್ತಕಗಳನ್ನು, ಕರಪತ್ರಗಳನ್ನು ಪ್ರಕಟಿಸುವುದು. ಖರೀದಿಸುವುದು ಮತ್ತು ಮಾರಾಟ ಮಾಡುವುದು. ಸಹಕಾರ ಮತ್ತು ತತ್ಸಂಬಂಧಿತ ಸಂಘಗಳ ಉದ್ದೇಶಗಳ ಮೇಲೆ ಚಲನಚಿತ್ರ, ಧ್ವನಿಸುರಳಿ, ಮತ್ತು ಸಾಕ್ಷ್ಯಚಿತ್ರಗಳನ್ನೊಳಗೊಂಡ ಶ್ವರಣ-ದೃಶ್ಯ ಸಾಮಗ್ರಿಗಳನ್ನು/ಸಲಕರಣೆಗಳನ್ನು ಉತ್ಪಾದಿಸಲು ವ್ಯವಸ್ಥೆ ಮಾಡುವುದು
(10) ಸದಸ್ಯ ಸಂಘಗಳಿಗೆ ಸೇರಿದ ಕಿರು ಅರಣ್ಯ ಉತ್ಪನ್ನಗಳ ಮತ್ತು ಸಂಸ್ಕರಣ ಘಟಕಗಳ, ಕೃಷಿ, ಗುಡಿ ಕೈಗಾರಿಕೆಗಳ, ಗ್ರಾಮೀಣ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸಂಬಂಧಿಸಿದ ವಸ್ತುಗಳ/ಲೇಖನಗಳ ಪ್ರದರ್ಶನ ಏರ್ಪಡಿಸುವುದು.
(11) ಸಹಕಾರ ತರಬೇತಿ ಕೇಂದ್ರಗಳಿಂದ ಸಹಕಾರದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮತ್ತು ವಿಭಾಗಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ತರಬೇತಿ ಮತ್ತು ಶಿಕ್ಷಣ ಕೊಡಿಸುವುದು
(12) ಸಹಕಾರ ಸಂಬಂಧಗಳನ್ನು ಅಭಿವೃದ್ದಿಪಡಿಸುವುದು ಮತ್ತು ಸಹಕಾರ ಚಳುವಳಿಯ ಸಮನ್ವಯ ಕಾರ್ಯಾಚರಣೆಗೆ ನೆರವು ನೀಡುವುದು. ಪತ್ತಿನ ಸದಸ್ಯ ಸಂಘಗಳ ಗ್ರಾಮೀಣ ಹಾಗೂ ನಗರ ಪ್ರದೇಶದ ಸದಸ್ಯರುಗಳಿಗೆ ಯಶಸ್ವಿನಿ ಯೋಜನೆಯನ್ನು ಅಳವಡಿಸಲು ಕ್ರಮಕೈಗೊಳ್ಳುವುದು.
(13) ಜಿಲ್ಲಾಮಟ್ಟದ/ರಾಜ್ಯಮಟ್ಟದ ಸಹಕಾರ ಸಮ್ಮೇಳನಗಳನ್ನು, ವಿಚಾರ ಸಂಕಿರಣಗಳನ್ನು, ಸಭೆಗಳನ್ನು ಕಾರ್ಯಾಗಾರಗಳನ್ನು, ಪ್ರದರ್ಶನಗಳನ್ನು ಇತ್ಯಾದಿಗಳಿಗೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಏರ್ಪಡಿಸಿ ನಡೆಸುವುದು.
(14) ಮಹಾಮಂಡಳದ ಉದ್ದೇಶಗಳನ್ನು ಸಾಧಿಸಲು ಅವಶ್ಯವಾದ ಸ್ಥಿರ ಆಸ್ತಿಗಳನ್ನು, ಸಾಮಾನ್ಯ ಸಭೆಯ ಅನುಮೋದನೆಯೊಂದಿಗೆ, ಮಾರಾಟ, ಗುತ್ತಿಗೆ, ಬದಲಾವಣೆ ಅಥವಾ ಅನ್ಯಥಾ ರೂಪದಲ್ಲಿ ಅರ್ಜಿಸಿಕೊಳ್ಳುವುದು, ಖರೀದಿಸುವುದು, ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಅಥವಾ ಮಾರಾಟ ಮಾಡುವುದು.
(15) ಸಾಮಾನ್ಯವಾಗಿ ಗ್ರಾಮೀಣಾಭಿವೃದ್ದಿಗೆ ವಿಶೇಷವಾಗಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಪ್ರೋತ್ಸಾಹಿಸುವುದು ಹಾಗೂ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಸಾಮಾಜಿಕ, ಆರ್ಥಿಕ ಸರ್ವೇಕ್ಷಣೆಗಳನ್ನು ನಡೆಸುವುದು ಮತ್ತು ಸಲಹೆ, ಮೌಲ್ಯಮಾಪನ ಇತ್ಯಾದಿ ಕೆಲಸಗಳನ್ನುತೆಗೆದುಕೊಳ್ಳುವುದು.
(16) ಪಠ್ಯ ಪುಸ್ತಕಗಳು, ನಿಯತಕಾಲಿಕೆಗಳು (ಮ್ಯಾಗಝಿನ್), ಇತರೆ ಅಗತ್ಯತೆಗಳೊನ್ನೊಳಗೊಂಡಂತೆ ಪುಸ್ತಕಗಳನ್ನು, ನಿಯತಕಾಲಿಕೆ (ಜರ್ನಲ್)ಗಳನ್ನು ಮತ್ತು ವೃತ್ತ ಪತ್ರಿಕೆಗಳನ್ನು ಮುದ್ರಿಸಿ ಮಾರಾಟ ಮಾಡುವುದು ಮತ್ತು ಹಂಚುವುದು.
(17) ಉಪವಿಧಿಗಳನ್ವಯ ಮತ್ತು ಮಂಡಲಿ ಕಾಲಕಾಲಕ್ಕೆ ರೂಪಿಸಿದ ಪೂರಕ ನಿಯಮಗಳನ್ವಯ ನಿಧಿಗಳನ್ನು ಕೂಡಿಸುವುದು ಮತ್ತು ಹಾಗೆ ಕೂಡಿಸಲ್ಪಟ್ಟ ನಿಧಿಗಳನ್ನು ನಿರ್ವಹಿಸುವುದು.
(18) ಸಹಕಾರ ಚಳುವಳಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ಆಗಿಂದಾಗ್ಗೆ ಸರ್ಕಾರಕ್ಕೆ ಹಾಗೂ ಸದಸ್ಯ ಸಂಘಗಳಿಗೆ ಸಲಹೆ ನೀಡುವುದು. ಸಹಕಾರಿ ಆಂದೋಲನವನ್ನು ಪುಷ್ಟೀಕರಿಸುವುದು. ಸಂಶೋಧಾನಾತ್ಮಕ ಕಾರ್ಯಗಳನ್ನು ತೆಗೆದುಕೊಳ್ಳುವುದು, ಸಮಸ್ಯೆಗಳನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳುವುದು.
(19) ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿನ ಸಹಕಾರಿ ಮಹಾಮಂಡಳ ಮತ್ತು ಇತರೆ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಪಡೆಯುವುದು. ರಾಜ್ಯ ಸರ್ಕಾರ, ನಿಬಂಧಕರು, ಸಹಕಾರ ಯೂನಿಯನ್, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ತತ್ಸಂಬಂದಿತ ಸಂಸ್ಥೆಗಳೊಡನೆ ಸಂಪರ್ಕವನ್ನು ಉಂಟು ಮಾಡುವುದು.
(20) ಮಹಾಮಂಡಳದ ಆರ್ಥಿಕ ಪರಿಸ್ಥಿತಿ, ಆಯವ್ಯಯ ಹಂಚಿಕೆ ಬಗ್ಗೆ ಗಮನಹರಿಸುವುದು.
(21) ರಾಜ್ಯ ಸರ್ಕಾರ/ನಿಬಂಧಕರು ನಮ್ಮ ಮಹಾಮಂಡಳಕ್ಕೆ ವಹಿಸುವಂಥ ಕರ್ತವ್ಯಗಳನ್ನು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸುವುದು.
(22) ರಾಜ್ಯದ ಪತ್ತಿನ ಸಹಕಾರ ಸಂಘಗಳ, ಮಹಿಳಾ ಪತ್ತಿನ ಸಹಕಾರ ಸಂಘಗಳ, ನೌಕರರ ಪತ್ತಿನ ಸಹಕಾರ ಸಂಘಗಳ ಹಾಗೂ ಇತರೆ ಸಹಕಾರ ಸಂಘಗಳ ಸದಸ್ಯರುಗಳಿಗೆ ಸಹಕಾರ ಅಭಿವೃದ್ದಿಗೆ ನೆರವಾಗಬಹುದಾದ ಜ್ಞಾನವನ್ನು ಹೊಂದಲು ಅನುಕೂಲ ಮಾಡಿಕೊಡುವುದಕ್ಕೆ, ರಾಜ್ಯದ ಒಳಗಡೆ ಮತ್ತು ಹೊರಗಡೆ ಮತ್ತು ದೇಶದ ಒಳಗಡೆ ಹಾಗೂ ಹೊರಗಡೆ ಅಧ್ಯಯನ ಪ್ರವಾಸಗಳ ವ್ಯವಸ್ಥೆ ಮಾqುವುದು.
(23) ಪತ್ತಿನ ಸಹಕಾರ ಸಂಘ ಸಂಸ್ಥೆಗಳ ನೌಕರರ ನೇಮಕಾತಿ, ಪದೋನ್ನತಿ ಹಾಗೂ ಸಾಲ ಮತ್ತು ಠೇವಣಿಗಳ ಉದ್ದೇಶಕ್ಕಾಗಿ ಕರಡು ಉಪವಿಧಿ ಹಾಗೂ ನಿಯಮಗಳನ್ನು ರಚಿಸುವುದು. ಸಹಕಾರ ಪತ್ತಿನ ಸಂಘಗಳು, ಮಹಿಳಾ ಪತ್ತಿನ ಸಹಕಾರ ಸಂಘಗಳು ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳು ಇಲ್ಲದ ಕಡೆ ಹೊಸ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸಿ ಪ್ರಾರಂಭಿಸಲು ತಾಂತ್ರಿಕ ಮತ್ತು ಇತರೆ ಸಲಹೆಗಳನ್ನು ನೀಡುವುದು ಮತ್ತು ಸದಸ್ಯ ಸಂಘಗಳು ಹೆಚ್ಚಿನ ಕಾರ್ಯನಿರ್ವಹಣೆಗೆ ಚಿಟ್ಫಂಡ್ ವ್ಯವಹಾರ ನಡಸುವುದಕ್ಕೆ ಮತ್ತು ಇತರೆ ಕಾರ್ಯಗಳ ಮಂಜೂರಾತಿಗೆ ಶಿಫಾರಸ್ಸು ಮಾಡಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದು.
(24) ಸರ್ಕಾರದಿಂದ ನಿಯೋಜನೆಗೊಂಡಿರುವ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ., ಬೆಂಗಳೂರು ಇವರ ಜೊತೆ ಒಪ್ಪಂದ ಏರ್ಪಡಿಸಿಕೊಂಡು ಮಹಾಮಂಡಳದ ಸದಸ್ಯ ಸಂಘಗಳಿಗೆ, ಶಾಖೆಗಳಿಗೆ ಇ-ಸ್ಟಾಂಪಿಂಗ್ ಪರವಾನಗಿ ಮಂಜೂರಾತಿಗೆ ಶಿಫಾರಸ್ಸು ಮಾಡಿ ಅದರ ನಿರ್ವಹಣೆ ಮಾಡುವುದು.
(25) ಸದಸ್ಯ ಸಂಘಗಳ ಕಾರ್ಯ ವೈಖರಿ ಬಗ್ಗೆ ಕಾಲಕಾಲಕ್ಕೆ ಸಾಂಖ್ಯಿಕ ವಿವರಗಳನ್ನು ಪಡೆಯುವುದು ಮತ್ತು ಅವಶ್ಯವಿದ್ದಲ್ಲಿ ಆ ಸಾಂಖ್ಯಿಕ ವಿವರಗಳನ್ನು ಪ್ರಕಟಿಸುವುದು. ಸದಸ್ಯ ಸಂಘಗಳಿಗೆ ಭೇಟಿ ನೀಡುವುದು ಮತ್ತು ಅವುಗಳ ಕೆಲಸಕಾರ್ಯಗಳ ನಿರ್ವಹಣೆಗೆ ಸಲಹೆ ನೀಡುವುದು.
(26) ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸದಸ್ಯರಾಗಿ ಮತ್ತು ಈ ಮಹಾಮಂಡಳ ನಿರ್ವಹಿಸುವ ಸಹಕಾರ ಶಿಕ್ಷಣ ನಿಧಿಯ ಸಲಹಾ ಸಮಿತಿಯ ಸದಸ್ಯರಾಗಿ ಭಾಗವಹಿಸುವುದು.
(27) ಮಹಾಮಂಡಳದ ಉದ್ದೇಶಗಳ ಸಾಧನೆಗೆ ಅನುಕೂಲವಾದಂಥ ಮತ್ತು ಪ್ರಾಸಂಗಿಕವಾದಂಥ ಇತರೆ ಎಲ್ಲಾ ಬಗೆಯ ಚಟುವಟಿಕೆಗಳನ್ನು ನಿರ್ವಹಿಸುವುದು.

Back To Top